ಗ್ರ್ಯಾಂಪಸ್ - 
ಸಿಟೇಸಿಯ ಗಣದ ಡೆಲ್ಫಿನಿಡೀ ಕುಟುಂಬಕ್ಕೆ ಸೇರಿದ ಒಂದು ಜಲಚರಸ್ತನಿ. ಡಾಲ್ಫಿನ್ನಿನ ಹತ್ತಿರ ಸಂಬಂಧಿ. ಇದಕ್ಕೆ ರಿಸ್ಸೋನ ಡಾಲ್ಫಿನ್ ಎಂಬ ಹೆಸರೂ ಇದೆ. ಗ್ರ್ಯಾಂಪಸ್‍ಗ್ರಿಸಿಯಸ್ ಇದರ ವೈಜ್ಞಾನಿಕ ಹೆಸರು. ಅಮೆರಿಕದ ಸಂಯುಕ್ತಸಂಸ್ಥಾನದ ಪೂರ್ವ ಹಾಗೂ ಪಶ್ಚಿಮ ತೀರ ಪ್ರದೇಶಗಳು. ಉತ್ತರ ಅಟ್ಲಾಂಟಿಕ್, ಮೆಡಿಟರೇನಿಯನ್, ಕೆಂಪು ಸಮುದ್ರ ಹಾಗೂ ಜಪಾನ್, ಚೀನ, ಆಸ್ಟ್ರೇಲಿಯಗಳ ಕರಾವಳಿಯಲ್ಲಿ ಇದು ವಾಸಿಸುತ್ತದೆ.

ಗ್ರ್ಯಾಂಪಸಿನ ಉದ್ದ ಸುಮಾರು 4 ಮೀ. ಇದರ ದೇಹ ಜಲವಾಸಕ್ಕೆ ಅನುಕೂಲವಾಗುವಂತೆ ಕದಿರಿನಾಕಾರದ್ದಾಗಿದ್ದು ಬಲಿಷ್ಠವಾಗಿದೆ. ಬೆನ್ನುಭಾಗ ಹೊಳಪುಳ್ಳ ಕಪ್ಪು ಬಣ್ಣದ್ದಾಗಿಯೂ ಉದರ ಭಾಗ ಬಿಳಿಬಣ್ಣದ್ದಾಗಿಯೂ ಇವೆ. ಬೆನ್ನಿನ ಮೇಲೆ ಒಂದೇ ಒಂದು ಈಜುರೆಕ್ಕೆ ಮತ್ತು ಭುಜದ ಬಳಿ ಆಚೀಚೆ ಎರಡು ಬಲವಾದ ಈಜುರೆಕ್ಕೆಗಳಿವೆ, ತಲೆ ಗುಂಡಗಿದೆ. ಇದರ ಹತ್ತಿರ ಸಂಬಂಧಿಯಾದ ಡಾಲ್ಫಿನಿನಲ್ಲಿ ಮೂತಿ ಚೂಪಾದ ಕೊಕ್ಕಿನಂತಿದೆಯಾದರೆ ಗ್ರ್ಯಾಂಪಸಿನಲ್ಲಿ ಮುಂಚಾಚಿದ ಮೂತಿಯಿಲ್ಲ. ದೇಹದ ಹಿಂತುದಿಯಲ್ಲಿ ಡಾಲ್ಫಿನುಗಳಲ್ಲಿರುವಂತೆ ಇಬ್ಭಾಗವಾದ ಬಾಲ ಇದೆ. ಕಣ್ಣುಗಳು ಬಲು ಚಿಕ್ಕವು. ಕೆಳದವಡೆಯಲ್ಲಿ ಮಾತ್ರ 3 - 7 ಜೊತೆ ಹಲ್ಲುಗಳಿವೆ. ಮೇಲ್ದವಡೆಯಲ್ಲಿ ಅಪರೂಪಕ್ಕೆ ಒಂದೆರಡು ಅವಶೇಷೀ ಹಲ್ಲುಗಳಿರುವುದುಂಟು. ಈ ಲಕ್ಷಣದಲ್ಲಿ ಗ್ರ್ಯಾಂಪಸ್ ಡಾಲ್ಫಿನ್ನುಗಳಿಂದ ಭಿನ್ನವೆನಿಸಿದೆ.

ಮೀನು ಮತ್ತು ಶಿರಪಾದಿಗಳು ಗ್ರ್ಯಾಂಪಸಿನ ಮುಖ್ಯ ಆಹಾರ. ಕೆಲವೊಮ್ಮೆ ಸಣ್ಣ ಗಾತ್ರದ ಡಾಲ್ಫಿನ್ನುಗಳನ್ನು ಪಾರ್ಪಾಯಿಸ್ ಮತ್ತು ಸೀಲ್ ಪ್ರಾಣಿಗಳನ್ನು ಇದು ತಿನ್ನುವುದುಂಟು. ಎರೆಗಳನ್ನು ಹಿಡಿಯುವಾಗ ಬಲು ಉಗ್ರವಾಗಿ ವರ್ತಿಸುವುದರಿಂದ ಗ್ರ್ಯಾಂಪಸಿಗೆ ಕೊಲೆಗಡುಕ ಎಂಬ ಹೆಸರಿದೆ. ಬಲು ಹೊಟ್ಟೆ ಬಾಕ ಪ್ರಾಣಿಯಿದು.  ಇದು 5 - 10 ಪ್ರಾಣಿಗಳನ್ನೊಳಗೊಂಡ ಗುಂಪುಗಳಲ್ಲಿ ವಾಸಿಸುತ್ತದೆ.
(ಕೆ.ಪಿ.ಆರ್.)
(ಪಿ.ಆರ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ